ಬರೆದದ್ದೆಲ್ಲವೂ ಕವಿತೆಯಾಗುವುದಿಲ್ಲ
ಕವಿತೆಯಾದದ್ದೆಲ್ಲವನ್ನು ಇಷ್ಟಪಡಲಾಗುವುದಿಲ್ಲ
ಇಷ್ಟಪಟ್ಟಿದ್ದೆಲ್ಲಾ ನೆನಪಿರುವುದಿಲ್ಲ
ನೆನಪಿನಲ್ಲಿ ಉಳಿಯುವುದೆಲ್ಲಾ ಶಾಶ್ವತವಲ್ಲ
ನನ್ನ ಕವಿತೆಗೆ ಮತ್ತು ನನಗೆ ಅಂತ್ಯವೊಂದು ಇರಲು
ಮನದಾಸೆ ಇಷ್ಟೇ
ನನ್ನ ಅಮೂರ್ತ ಕಲ್ಪನೆಗಳು ಮೂಡಿ ಮೂರ್ತವಾಗಲಿ
ಇರುವಷ್ಟು ಹೊತ್ತು ನನಗೂ
ನನ್ನ ಸುತ್ತಣ ಹಬ್ಬಿರುವ
ಕಾನನಕ್ಕೂ ಬೆಸೆಯುವ ಬಂಧವಾಗಲಿ
ಅದರೊಳಗೆ ನಾನು ಒಂದು ಸಣ್ಣ ಮಿಂಚು ಹುಳವಾಗಿ
ತನ್ನ ದಾರಿ ಹುಡುಕುತ್ತಾ
ಬೆಳಕನ್ನು ಬೀರುತ್ತಾ
ಬತ್ತಿದ ಕಲ್ಪನೆಗಳಿಗೆ ರೆಕ್ಕೆಯಾಗುತ್ತಾ ಸಾಗುತ್ತಿರಲು
ಬೇಸತ್ತ ಎವೆಗಳಿಗೊಂದು ನಿರೀಕ್ಷೆಯ ಕಿರಣವಾಗಲಿ
ಮತ್ತೆ ನನ್ನನ್ನಾರು ನೆನಪಿಸಲಿ ಇಲ್ಲದಿರಲಿ
ನನ್ನ ನೆನಪುಗಳೂ ಮಸುಕಾಗುವ ನನಗೆ ಆ ಚಿಂತೆ ಬಾರದಿರಲಿ
No comments:
Post a Comment