Thursday, January 20, 2011

ಹೆಣ್ಣಿನ ಬಯಕೆಗಳೇನು?



ಆಧುನಿಕತೆಯ ಬಿರುಗಾಳಿ ಬೀಸುವವರೆಗೆ ಬಯಕೆ, ಆಸೆ, ಡಿಮ್ಯಾಂಡುಗಳೆಲ್ಲ ದೈವವು ಕೇವಲ ತನ್ನ ಪಾಲಿಗೆ ಕೊಡಮಾಡಿದ ಸವಲತ್ತುಗಳು ಎಂದು ಗಂಡು ಭಾವಿಸಿದ್ದ. ಈಗ ಹೆಣ್ಣಿನ ವಿಮೋಚನೆಯನ್ನು ಸಾಧಿಸಿದ ಹೆಮ್ಮೆಯಲ್ಲಿ ಉಬ್ಬಿರುವ ಯುರೋಪಿನಲ್ಲಿ ಇಪ್ಪತ್ತನೆಯ ಶತಮಾನದವರೆಗೆ ಆಕೆಗೆ ಮತದಾನದ ಹಕ್ಕನ್ನೂ ನಿರಾಕರಿಸಲಾಗಿತ್ತು. ಇಂದಿಗೂ ಕೆಲವು ಇಸ್ಲಾಮಿಕ್  ದೇಶಗಳಲ್ಲಿ ಮಹಿಳೆಯರಿಗೆ ವಾಹನ ಚಾಲನೆಯ ಪರವಾನಗಿ ದೊರೆಯುವುದಿಲ್ಲ. ಸಾಮಾನ್ಯವಾಗಿ ಅಪ್ರಾಪ್ತರಿಗೆ,ಪಶುಗಳಿಗೆ, ಬುದ್ಧಿ ಸ್ಥಿಮಿತದಲ್ಲಿಲ್ಲದವರಿಗೆ ಈ ಹಕ್ಕನ್ನು ನಿರಾಕರಿಸಲಾಗುತ್ತದೆ. ಬಹುಕಾಲದವರೆಗೆ ಗಂಡು ಹೆಣ್ಣನ್ನು ಈ ಗುಂಪಿಗಿಂತ ವಿಭಿನ್ನವಾಗಿಯೇನು ಕಂಡಿರಲಿಲ್ಲ.
ಆಧುನಿಕತೆಗೆ ತೆರೆದುಕೊಂಡ ಸಮಾಜದಲ್ಲಿ ಹೆಣ್ಣು ತನ್ನ ಮನೆಯ ಹೊರಗಿನ ಹಕ್ಕುಗಳನ್ನು ಗಳಿಸಿಕೊಳ್ಳುವ ಹೋರಾಟದಲ್ಲಿಯೇ ಬಹುಕಾಲ ಮಗ್ನಳಾಗಿರಬೇಕಾಯಿತು. ನಾಲ್ಕು ಗೊಡೆಗಳ ನಡುವಿನ ತನ್ನ ಹಕ್ಕು, ಬಯಕೆಗಳನ್ನು ವ್ಯಕ್ತ ಪಡಿಸುವ ಅವಕಾಶ ಆಕೆಗೆ ಇಂದಿಗೂ ಗಗನ ಕುಸುಮವೇ. ಆದರೂ ನಮ್ಮ ಜನ ಜೀವನದಲ್ಲಿ ನುಸುಳಿಕೊಂಡಿರುವ ಮುಕ್ತತೆಯ ನೆಪದಲ್ಲಿ ಹೆಣ್ಣಿನ ಬಯಕೆಗಳೇನು ಆಕೆ ತನ್ನ ಕೈ ಹಿಡಿಯುವ ಗಂಡನಲ್ಲಿ ಕಾಣುವ ಗುಣಗಳೇನು ಎನ್ನುವವು ಹೊರಬಂದಿವೆ.
ಹೆಣ್ಣು ಎಂದಿಗೂ ತನ್ನ ಬಯಕೆಯನ್ನು ಆದಷ್ಟು ಸಾತ್ವಿಕವಾಗಿಯೇ ಮಂಡಿಸುತ್ತಾಳೆ. ಇದಕ್ಕೆ ಬಹುಭಾಗ ನಮ್ಮ ಸಮಾಜಗಳಲ್ಲಿ ಹೆಣ್ಣನ್ನು ಚಿತ್ರಿಸಿರುವ, ಆಕೆಗೆಂದು ಕಟ್ಟಿಕೊಟ್ಟಿರುವ ಸಿದ್ಢಮಾದರಿಗಳೇ ಕಾರಣ. ಗಂಡು ತಾನು ಬಯಸುವ ಹೆಣ್ಣನ್ನು ಸುಸ್ಪಷ್ಟವಾಗಿ ವಿವರಿಸುತ್ತಾನೆ. ಸಂಪಿಗೆಯಂತೆ ನೀಳ ನಾಸಿಕ, ಕೆಂದುಟಿಗಳು, ನೀಳ ಜಡೆ ಹೀಗೆ ಶುರುವಾಗ ಪಟ್ಟಿಯಲ್ಲಿ ಹೆಣ್ಣಿನ ಎಲ್ಲಾ ಅಂಗಾಂಗಳ ಬಗೆಗಿನ ತನ್ನ ಅಪೇಕ್ಷೆಯನ್ನು ವ್ಯಕ್ತ ಪಡಿಸಬಲ್ಲ ಗಂಡು. ಆದರೆ ಹೆಣ್ಣಿನ ಮನಸ್ಸಿನಲ್ಲಿ ಹಲವು ಬಗೆಯ ಅಪೇಕ್ಷೆಗಳಿದ್ದರೂ ಆಕೆ ತೀರಾ ಸಾತ್ವಿಕವಾದ ಭಾಷೆಯಲ್ಲಿಯೇ ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಾಳೆ.
ಹೆಣ್ಣಿನದು ಭಾವ ಪ್ರಪಂಚವಾದ್ದರಿಂದ ಗಂಡಿನಂತೆ ಆಕೆಗೆ ಬಹುಶಃ ದೇಹ ವಿನ್ಯಾಸದ, ಅಂಗಾಂಗಗಳ ಕುರಿತು ನಿರ್ದಿಷ್ಟವಾದ ಅಪೇಕ್ಷೆಗಳು ಅಷ್ಟು ಪ್ರಮುಖವಾಗುವುದಿಲ್ಲ. ಕುದುರೆಯ ಮೇಲೆ ಕೂತು ಬರುವ ರಾಜಕುಮಾರ, ತೆರಯ ಮೇಲೆ ಕ್ರಾಪಿನೊಳಕ್ಕೆ ಬೆರಳಾಡಿಸುತ್ತ ನಸುನಗುವ ಚಿತ್ರನಟ ಹೀಗೆ ಅನೇಕ ಚಿತ್ರಣಗಳನ್ನು ಕಟ್ಟಿಕೊಂಡು ತಮ್ಮ ಬಯಕೆಗಳನ್ನು ವ್ಯಕ್ತಪಡಿಸುವುದು ಸಾಮಾನ್ಯ.
ಆದರೂ ಆಧುನಿಕ ಹೆಣ್ಣು ಮದುವೆಯಾದ ಗಂಡಿನಲ್ಲಿ ನಾನಾ ಅಂಶಗಳನ್ನು ಅಪೇಕ್ಷಿಸುತ್ತಾಳೆ. ತಂದೆಯ ತೋಳುಗಳು ಕೊಟ್ಟ ಭದ್ರತೆಯ, ನೆಮ್ಮದಿಯ ಭಾವವನ್ನು ಆಕೆ ಗಂಡನ ಅಪ್ಪುಗೆಯಲ್ಲಿ ಹುಡುಕುತ್ತಿರುತ್ತಾಳೆ. ಕ್ಲಾಸ್ ರೂಮಿನಲ್ಲಿ ಎರಡು ಅಡಿ ದೂರ ಕೂತರೂ ತಣ್ಣಗೆ ಸಾಂತ್ವನ ಹೇಳುವ ನಿರ್ಮಲ ಹೃದಯದ ಗೆಳೆಯನನ್ನು ಆಕೆ ಗಂಡನಲ್ಲಿ ಕಾಣಲು ಪ್ರಯತ್ನಿಸುತ್ತಿರುತ್ತಾಳೆ. ತನ್ನ ಚಂಚಲತೆ, ಗೊಂದಲಗಳಿಗೆ ಸಹಾನುಭೂತಿಯನ್ನು ಹೊಂದಿರುವ, ಅವುಗಳನ್ನು ದುರ್ಬಳಕೆ ಮಾಡದೆ ತನ್ನ ಒಳಿತಿಗೆ ಬಳಸಲು ಸ್ವಚ್ಛ ಮನಸ್ಸಿನಿಂದ ಸಹಾಯ ಹಸ್ತ ಚಾಚುವ ಗುರುವನ್ನು ಎದುರುನೋಡುತ್ತಿರುತ್ತಾಳೆ. ತನ್ನ ಮಾನಸಿಕ ವೇದನೆಯನ್ನು ಕಡಿಮೆ ಮಾಡುವ, ಭಾವನೆಗಳಿಗೆ ಬೆಲೆ ನೀಡುವ, ದುಃಖಕ್ಕೆ ಹೆಗಲಾಗುವ ಮನೋವೈದ್ಯನಾಗಿರಬೇಕು ತನ್ನ ಗಂಡ ಎಂದು ಅಪೇಕ್ಷಿಸುತ್ತಾಳೆ. ಇವುಗಳ ಜೊತೆಗೆ, ಗಂಡ ದೊಡ್ಡ ಮನೆ ಕಟ್ಟಬೇಕು, ವಜ್ರದ ನೆಕ್ಲೆಸ್ ಮಾಡಿಸಿಕೊಡಬೇಕು, ದೂರದ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯಬೇಕು- ಹೀಗೆ ತಾನೇ ಸಣ್ಣತನಗಳು ಎಂದು ಭಾವಿಸುವ ಅನೇಕ ಬಯಕೆಗಳೂ ಇರುತ್ತವೆ.
ವ್ಯಕ್ತಿ ಸ್ವಾತಂತ್ರ್ಯದ ಗಾಳಿ
ಬಯಕೆಗಳು ಅಪೇಕ್ಷೆಗಳು ಎಲ್ಲೆಯಿಲ್ಲದೆ ಹಬ್ಬಿಕೊಂಡಿದ್ದರೂ ಮನುಷ್ಯ ಮಾತ್ರನಾದವನು ಎಲ್ಲವನ್ನೂ ಪಡೆಯುವುದಕ್ಕೆ ಸಾಧ್ಯವಿಲ್ಲ. ಇನ್ನೊಬ್ಬ ವ್ಯಕ್ತಿಯ ಸರ್ವ ಅಪೇಕ್ಷೆಗಳನ್ನೂ ಪೂರೈಸುವುದಕ್ಕಂತೂ ಮನುಷ್ಯನಿಗಿರಲಿ ಆ ಭಗವಂತನಿಗೂ ಸಾಧ್ಯವಿಲ್ಲ. ಯಾವುದೇ ಸಮಾಜದಲ್ಲಿ ವ್ಯಕ್ತಿಗೆ ತನ್ನ ವೈಯಕ್ತಿಕ ಬಯಕೆ, ಅಪೇಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಲಿಕ್ಕೆ ಆಸ್ಪದವಾಗದಷ್ಟು ತಾಪತ್ರಯಗಳಿದ್ದಾಗ, ತನ್ನ ಸುಖಾಪೇಕ್ಷೆ ನ್ಯಾಯ ಸಮ್ಮತವಾದದ್ದು, ಸ್ವಾರ್ಥವಲ್ಲ ಎನ್ನುವ ಭಾವನೆಯು ನೆಲೆಗೊಳ್ಳದಿದ್ದಾಗ ಆತ ಸ್ವಾಭಾವಿಕವಾಗಿ ಪಾಲಿಗೆ ಬಂದದ್ದನ್ನು ಪಂಚಾಮೃತ ಎಂದು ಭಾವಿಸಿ ಸಿಕ್ಕಿದ್ದರಲ್ಲಿ ಬೇಕಿದ್ದನ್ನು ಕಂಡುಕೊಳ್ಳುತ್ತ ನೆಮ್ಮದಿಯಾಗಿದ್ದ ಎನ್ನಬಹುದು.
ಆದರೆ ಯಾವಾಗ ಆರ್ಥಿಕವಾಗಿ ಕುಟುಂಬಗಳು ಸದೃಢವಾಗಲು ಶುರುವಾದವೋ, ಯಾವಾಗ ಪಶ್ಚಿಮದಿಂದ ಬಂದ ತಂತ್ರಜ್ಞಾನ, ಯಂತ್ರೋಪಕರಣಗಳು, ಇಟಾಲಿಯನ್ ಮಾರ್ಬಲುಗಳು, ಪ್ರೆಶರ್ ಕುಕ್ಕರ್ ಗಳು, ಮೈಕ್ರೋ ಓವನ್ನುಗಳು ನೇರವಾಗಿ ಮನೆಯನ್ನು  ಪ್ರವೇಶಿಸಲು ಶುರು ಮಾಡಿದವೋ ಪರಿಸ್ಥಿತಿ ಬದಲಾಗತೊಡಗಿತು. ಜಾಗತೀಕರಣದಿಂದಾಗಿ ಆರ್ಥಿಕ ವ್ಯವಸ್ಥೆ ವ್ಯಾಪಕವಾದಷ್ಟೂ ವ್ಯಕ್ತಿಗಳು ಆರ್ಥಿಕವಾಗಿ ಸದೃಢವಾಗಲು ಅನೇಕ ದಾರಿಗಳು ತೆರೆದುಕೊಂಡವು.
ಆರ್ಥಿಕ ಸ್ವಾತಂತ್ರ್ಯದ ಜೊತೆಗೇ ಮಿತ ಸಂತಾನ ಮೊದಲಾದ ಪ್ರಗತಿಪರ ನಿಲುವುಗಳಿಂದಾಗಿ ಸಮಾಜದಲ್ಲಿ ವ್ಯಕ್ತಿಗಳಿಗೆ ತಮ್ಮ ವೈಯಕ್ತಿಕ ಬಯಕೆ, ಆಕಾಂಕ್ಷೆಗಳ ಅರಿವಾಗತೊಡಗಿತು ಎನ್ನಬಹುದು. ತನ್ನ ಕುಟುಂಬ, ತನ್ನ ಪರಿವಾರ ಸಂತೋಷವಾಗಿರಬೇಕು ನಿಜ, ಆದರೆ ಅದಕ್ಕೆಂದು ನಾನು ನನ್ನ ಸುಖ ಸಂತೋಷಗಳನ್ನು, ಬಯಕೆಗಳನ್ನು ಬಲಿಕೊಡಬಾರದು ಎನ್ನುವ ಎಚ್ಚರ ಮೆಲ್ಲಗೆ ಹೆಣ್ಣಿನಲ್ಲೂ ಬೇರೂರಲು ಶುರುವಾಯಿತು. ಇದರಿಂದಾಗಿ ಮನೆಯ ಹೊರಗೂ ಮಹಿಳೆಯರು ತಮ್ಮ ಛಾಪು ಒತ್ತುವ ಸಾಧನೆಯನ್ನು ಮಾಡಲು ಸಾಧ್ಯವಾಯಿತು ಎನ್ನಬಹುದು.
ಇವನು ಇನಿಯನಲ್ಲ...
ತಮ್ಮಲ್ಲಿನ ಸುಪ್ತವಾಗಿದ್ದ ಬಯಕೆಗಳು ಎಲ್ಲಿವರೆಗೆ ನಿಷಿದ್ಧ ಎಂಬ ಕಟ್ಟಳೆಯು ಸಮಾಜದಲ್ಲಿ ಜಾರಿಯಲ್ಲಿತ್ತೋ ಅಲ್ಲಿಯವರೆಗೆ ಗಂಡನಿಗೆ ಪರ ಸ್ತ್ರೀಯೊಂದಿಗಿನ ಸಹವಾಸ, ಹೆಣ್ಣಿಗೆ ಇನ್ನೊಬ್ಬ ಗಂಡಸಿನೊಂದಿಗಿನ ಒಡನಾಟ ಲಂಪಟತನವೆಂದೇ ಪರಿಗಣಿಸಲ್ಪಡುತ್ತಿತ್ತು. ಮದುವೆಯಾದ ಹೆಂಗಸೊಬ್ಬಳು ದೈಹಿಕ ಕಾಮನೆಯನ್ನು ಹೊರತು ಪಡಿಸಿದ ಬೇರಾವ ಆಸರೆಗಾಗಿಯಾದರೂ ಬೇರೊಬ್ಬ ಗಂಡಸಿಗೆ ಹತ್ತಿರವಾಗುವುದು ಸ್ವತಃ ಆ ಹೆಣ್ಣಿಗೇ ಅಸಹನೀಯವಾಗಿತ್ತು.
ಒಂದರ ಬಾಲ ಹಿಡಿದು ಒಂದು ಚಲಿಸುವ ಬೃಹತ್ ಸುರುಳಿಯಂತೆ ಬದಲಾವಣೆಗಳು ಶುರುವಿಟ್ಟುಕೊಂಡಾಗ ಈ ಗ್ರಹಿಕೆಯಲ್ಲಿ ಬದಲಾವಣೆಗಳು ಕಾಣಲು ಶುರುವಾದವು. ಹೆಣ್ಣು ಗಂಡುಗಳಿಬ್ಬರೂ ಸಮಾನವಾದ ಶಿಕ್ಷಣವನ್ನು ಪಡೆದು ಒಬ್ಬರನ್ನೊಬ್ಬರು ಸಮಾನ ಪಾತಳಿಯಲ್ಲಿ ಕಾಣುವ, ಗೌರವಿಸುವ, ಅವಲಂಬಿಸುವ ಪರಿಪಾಠ ಬೆಳೆದಂತೆ ಹೆಣ್ಣು ಗಂಡಿನ ನಡುವಿನ ಸಂಬಂಧಗಳ ವೈವಿಧ್ಯವೂ ಹೆಚ್ಚಾಗಲು ಶುರುವಾಯಿತು. ಹಿಂದಿನ ತಲೆಮಾರು ತನ್ನ ಅನುಮಾನದ ದೃಷ್ಟಿಗೆ ತಾನೇ ನಾಚಿಕೊಳ್ಳುವಷ್ಟು ಪರಿಶುದ್ಧವಾದ ಸ್ನೇಹದ ಒಡನಾಟ ಗಂಡು ಹೆಣ್ಣುಗಳ ನಡುವೆ ಉಂಟಾಯಿತು. ಇವೆಲ್ಲಾ ಬೆಳವಣಿಗೆಗಳಿಗೆ ವೇಗವರ್ಧಕವಾಗಿ ಕೆಲಸ ಮಾಡಿದ್ದು ಹಿಂಜರಿಕೆಯಿಲ್ಲದೆ ಎಲ್ಲಾ ಮನೆಗಳನ್ನು, ಖಾಸಗಿ ವಲಯಗಳನ್ನು ಆಕ್ರಮಿಸುತ್ತಿರುವ ತಂತ್ರಜ್ಞಾನ!

No comments:

Post a Comment